ನೆಪಿಡೀ-
	ಆತ್ರ್ರಾಪೊಡ ವಿಭಾಗ ಕೀಟ ವರ್ಗ ಹಾಗೂ ಹೆಮಿಪ್ಟರ ಉಪವರ್ಗಕ್ಕೆ ಸೇರಿದೆ, ಅಪೂರ್ವ ತರದ ಜಲವಾಸಿ ಕೀಟಗಳ ಕುಟುಂಬ. ಇದರಲ್ಲಿ 150 ಪ್ರಭೇದಗಳಿವೆ. ಇವು ಮೊದಲಿಗೆ ನೆಲವಾಸಿಗಳಾಗಿದ್ದು, ಕಾರಣಾಂತರಗಳಿಂದ ಜಲವಾಸಿಗಳಾಗಿ ವಿಕಾಸಗೊಂಡಿರುವ ಕೀಟಗಳು. ಹೊಸ ಪರಿಸರಕ್ಕೆ ಹೊಂದಾಣಿಕೆಗಳನ್ನು ರೂಪಿಸಿಗೊಂಡಿವೆ. ಸಾಮಾನ್ಯವಾಗಿ ಇವು ಬಾಹ್ಯ ರೂಪದಲ್ಲಿ ಚೇಳುಗಳಂತೆ ಕಾಣುವುದರಿಂದ ಇವನ್ನು ನೀರು ಚೇಳುಗಳೆಂದು ಕರೆಯುವುದಿದೆ. ಚಿಕ್ಕ ತಲೆ, ಹಾಗೂ ನೀರಿನಲ್ಲಿ ಮುನ್ನುಗ್ಗಲು ಅನುಕೂಲವಾಗುವಂಥ ದೇಹರಚನೆ ಇವುಗಳ ಮುಖ್ಯ ಲಕ್ಷಣ. ಕೈಟಿನ್ನಿನ ಹೊರಕಂಕಾಲವಿರುವುದರಿಂದ ದೇಹದೊಳಗೆ ನೀರು ಪ್ರವೇಶಿಸದಂತೆ ಸಹಾಯಕವಾಗಿದೆ. ನೀರಿನಲ್ಲಿ ವಿಲಕ್ಷಣ ಗತಿಯಲ್ಲಿ ಚಲಿಸಲು ಸಹಾಯಕವಾದ ಕೀಲುಗಳಿರುವ 3 ಜೊತೆ ಉದ್ದ ಕಾಲುಗಳುಂಟು. ಇವುಗಳಲ್ಲಿ ಮುಂಗಾಲುಗಳು ಬಹಳ ಪ್ರಬಲವಾಗಿದ್ದು, ಕೊಳ್ಳೆಗಳನ್ನು ಹಿಡಿದು ತಿನ್ನಲು ಸಹಾಯಕವಾಗುವಂತೆ ವಿಶೇಷವಾಗಿ ಮಾರ್ಪಾಟಾಗಿದೆ. ಹಿಂಗಾಲುಗಳು ಜಲಗಮನಕ್ಕೆ ಅನುಕೂಲವಾಗಿ ರೂಪಗೊಂಡಿವೆ. ಸ್ಪರ್ಶಾಂಗಗಳಾದ ಕುಡಿಮೀಸೆಗಳಲ್ಲಿ ಮೂರು ಭಾಗಗಳುಂಟು. ಉದರದ ಹಿಂತುದಿಯಲ್ಲಿ ನೀಳವಾದ ಶ್ವಾಸನಾಳಗಳಿವೆ. ನೆನಪಿಡೀ ಕೀಟತಗಳು ಜಲ ವಾಸಿಗಳಾಗಿದ್ದರು ಕೂಡ ನೀರಿನಲ್ಲಿ ಕರಗಿರುವ ಆಕ್ಸಿಜನನ್ನು ಉಸಿರಾಡಲು ಬೇಕಾದ ಕಿವಿರುಗಳನ್ನು ಪಡೆದಿಲ್ಲ. ಉದರದ ಹಿಂತುದಿಯಲ್ಲಿರುವ ಶ್ವಾಸನಾಳಗಳು ಹೊರ ವಾಯುಮಂಡಲದಿಂದ ಆಕ್ಸಿಜನ್ನನ್ನು ಒಳಗೆ ಎಳೆದುಕೊಳ್ಳಲು ಸಹಾಯಕವಾಗಿವೆ. ನೀರಿನಲ್ಲಿ ವಾಸಿಸುವ ತರತರದ ಚಿಕ್ಕಪುಟ್ಟ ಪ್ರಾಣಿಗಳನ್ನು ಹಿಡಿದು ತಿಂದು ನೆಪಿಡೀ ಕೀಟಗಳು ಬದುಕುತ್ತವೆ. ತಾವು ಹಿಡಿದ ಕೊಳ್ಳೆಗಳಿಗೆ ಲಾಲಾರಸದಂಥ ಒಂದು ರೀತಿಯ ವಿಷವನ್ನು ಚುಚ್ಚಿ ಸುಲಭವಾಗಿ ಕೊಲ್ಲುವುವು. ಭಾರತದಲ್ಲಿ ರನಾತ್ರ ಹಾಗೂ ನೇಪಗಳೆಂಬ ನೀರುಚೇಳುಗಳು ಉಂಟು. ಇವು ಸಿಹಿನೀರಿನ ಜಲಾಶಯಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಇವುಗಳಲ್ಲಿ ನೇಪ ಕೆಸರು ಇಲ್ಲವೇ ನೀರಲ್ಲಿ ಬಿದ್ದಿರುವ ಎಲೆ ಇತ್ಯಾದಿಗಳ ಅಡಿಯಲ್ಲಿ ಅಡಗಿಕೊಂಡಿರುತ್ತದೆ. ರನಾತ್ರಕ್ಕೆ ನೇಪಕ್ಕಿಂತ ಹೆಚ್ಚು ನೀಳವಾದ ದೇಹ ಹಾಗೂ ಉದ್ದದ ಶ್ವಾಸನಾಳಗಳಿವೆ. ಹುಲ್ಲಿನಿಂದ ಕೂಡಿರುವ ಜಲಾಶಯ ಪ್ರದೇಶ, ಜಲ ಸಸ್ಯಗಳಿರುವ ಕೊಳ ಇತ್ಯಾದಿಗಳಲ್ಲಿ ರನಾತ್ರ ವಾಸಿಸುತ್ತದೆ. ಇದು ಜಲಸಸ್ಯಗಳಡಿಯಲ್ಲಿ ಅಡಗಿಕೊಂಡಿದ್ದು ತನ್ನ ಶ್ವಾಸನಾಳವನ್ನು ನೀರ ಹೊರಕ್ಕೆ ಕಳಿಸಿ ಉಸಿರಾಡುತ್ತದೆ. ಮರಿಗಳ ಸುಗಮ ಜೀವನಕ್ಕೆ ಅನುಕೂಲವಾಗುವಂತೆ, ರನಾತ್ರ ತನ್ನ ಮೊಟ್ಟೆಗಳನ್ನು ಜಲಸಸ್ಯಗಳ ಎಲೆಗಳಲ್ಲಿ ಕಚ್ಚುಗಳನ್ನು ಮಾಡಿ ಇಡುತ್ತದೆ. ಮರಿ ಅಪ್ಸರೆ ಹುಳು ಹಲವು ರೀತಿಯಲ್ಲಿ ತಾಯನ್ನು ಹೋಲುತ್ತದೆ. ರೂಪಾಂತರದ ಬಳಿಕ ಪ್ರೌಢಕೀಟವಾಗಿ ಬೆಳೆಯುವುದು.
(ಬಿ.ಆರ್.ಸಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ